ತೊಂಡೇಬಳ್ಳಿ
ಒಂದು ತರಕಾರಿ ಸಸ್ಯ.  ಕ್ಯುಕರ್‍ಬಿಟೇಸೀ ಕುಟುಂಬಕ್ಕೆ ಸೇರಿದೆ. ಸೆಫಲ್ಯಾಂಡ್ರ ಇಂಡಿಕ ಇದರ ಶಾಸ್ತ್ರೀಯ ಹೆಸರು. ಇದು ಭಾರತದ ಎಲ್ಲೆಡೆಯಲ್ಲಿಯೂ ಕಳೆಗಿಡವಾಗಿ ಬೆಳೆಯುತ್ತದೆ.  ಇದು ಒಂದು ಬಳ್ಳಿ ಅಥವಾ ನೆಲದ ಮೇಲೆ ಅಡ್ಡಡ್ಡಲಾಗಿ ಬೆಳೆಯುವ ಬಹುವಾರ್ಷಿಕ ಮೂಲಿಕೆ. ಇದರ ಬೇರುಗಳು ಉದ್ದವಾಗಿ ಗೆಡ್ಡೆಯಾಕಾರವಾಗಿವೆ. ಹಣ್ಣುಗಳು ಅಂಡಾಕಾರದವು ಇಲ್ಲವೆ ಕದಿರಿನಾಕಾರದವು. ಇವುಗಳ ಉದ್ದ ಸುಮಾರು 1"-2" ಮತ್ತು ಸುತ್ತಳತೆ 1/2"-1".  ಕಳಿತ ಹಣ್ಣುಗಳು ಉಜ್ಜ್ವಲ ಹೊಂಬಣ್ಣದಿಂದ ಕೂಡಿವೆ. ಕಾಯಿ ನುಣುಪು. ಇದರ ಬಣ್ಣ ದಟ್ಟ ಹಸಿರು ಮತ್ತು ಬಿಳಿಯ ಗೆರೆಗಳು ಉಂಟು. ಹಸಿರು ಕಾಯಿಗಳನ್ನು ತರಕಾರಿಯಾಗಿ ಬಳಸುತ್ತಾರೆ. ಪಕ್ವವಾದ ಹಣ್ಣುಗಳನ್ನು ಹಸಿಯಾಗಿಯೇ ತಿನ್ನುವುದುಂಟು. ತೊಂಡೇಬಳ್ಳಿಯಲ್ಲಿ ಅನೇಕ ವಿಧಗಳಿವೆ.  ಒಂದು ಬಗೆ ಕಹಿಯಾದ ಹಣ್ಣುಗಳನ್ನು ಬಿಡುತ್ತದೆ.

ಈ ಸಸ್ಯವನ್ನು ಬೇರಿನಿಂದಲೋ ಕಾಂಡತುಂಡುಗಳಿಂದಲೋ ಬೆಳೆಸುತ್ತಾರೆ. ನೀರಿನ ಸೌಕರ್ಯ ಚೆನ್ನಾಗಿ ಇರುವ ಆಳವಾದ, ಕೆಂಪಾದ, ಜಿಗಟುಮಣ್ಣಿನಲ್ಲಿ ಹಾಗೂ ನೀರಾವರಿ ಸೌಕರ್ಯ ಇರುವ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಏಪ್ರಿಲ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳಿನತನಕವೂ ಹೆಚ್ಚಿನ ಮೊತ್ತದಲ್ಲಿ ಫಲ ನೀಡುತ್ತದೆ.

ತೊಂಡೇಬಳ್ಳಿಯ ಬೇರು, ಕಾಂಡ ಹಾಗೂ ಎಲೆಗಳನ್ನು ಚರ್ಮರೋಗ ನಿವಾರಣೆಗೂ ನೆಗಡಿ, ಶೀತ ಹಾಗೂ ಬಹುಮೂತ್ರ ವ್ಯಾಧಿಯ ನಿವಾರಣೆಗೂ ಬಳಸುವರು.
(ಕೆ.ಜಿಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ